ಓಮಹಾ: ಅಮೆರಿಕ ಸಂಯುಕ್ತ ಸಂಸ್ಥಾನದ ನಿಬ್ರ್ಯಾಸ್ಕ ರಾಜ್ಯದ ಅತ್ಯಂತ ದೊಡ್ಡ ನಗರ, ಮುಖ್ಯ ವ್ಯಾಪಾರಕೆಂದ್ರ, ಈ ಸ್ಥಳದಲ್ಲಿ ಮೊದಲು ಓಮಹಾ (ಅಥವಾ ಮಹಾ) ಬುಡಕಟ್ಟಿನ ಇಂಡಿಯನರು ವಾಸಿಸುತ್ತಿದ್ದುದರಿಂದ ಇದಕ್ಕೆ ಈ ಹೆಸರು ಬಂದಿದೆ. ದೇಶದ ಮಧ್ಯದಲ್ಲಿರುವ ಈ ನಗರ ಅಲ್ಲಿಯ ಮಿóಸೂರಿ ನದಿಯ ದಂಡೆಯ ಮೇಲಣ ಪ್ರಮುಖ ಬಂದರು ; ರೈಲುನಿಲ್ದಾಣ 1825ರಷ್ಟು ಹಿಂದಿನಿಂದಲೇ ಇದು ಇಂಡಿಯನರ ವ್ಯಾಪಾರಕೇಂದ್ರವಾಗಿ ಪ್ರಸಿದ್ಧಿ ಪಡೆದಿತ್ತು. ನಿಬ್ರ್ಯಾಸ್ಕ ಪ್ರದೇಶದಲ್ಲಿ ವಸತಿಗೆ ಅವಕಾಶ ನೀಡಿದಾಗ ಜನ ಅಲ್ಲಿ ನೆಲಸಿದರು; ಓಮಹಾ ಪಟ್ಟಣದ ಸ್ಥಾಪನೆಯಾಯಿತು (1854). 13 ವರ್ಷಗಳ ಅನಂತರ ಇದನ್ನು ನಗರವನ್ನಾಗಿ ಪರಿಗಣಿಸಲಾಯಿತು. 1867ರವರೆಗೆ ಇದು ಆ ಪ್ರದೇಶದ ಆಡಳಿತ ಕೇಂದ್ರವೂ ಆಗಿತ್ತು. ಜಾನುವಾರು ವ್ಯಾಪಾರಕೇಂದ್ರ. ಜೋಸ್ಲಿನ್ ವಸ್ತುಸಂಗ್ರಹಾಲಯ, 1868ರಲ್ಲಿ ನಿರ್ಮಿಸಲಾದ ಓಮಹಾ ಕೋಟೆ ಇವು ಇಲ್ಲಿಯ ಪ್ರೇಕ್ಷಣೀಯ ಕಟ್ಟಡಗಳು. ರೋಮನ್ ಕೆಥೊಲಿಕ್ ಮತ್ತು ಪ್ರಾಟಿಸ್ಟಂಟ್ ಪಂಥಗಳ ಚರ್ಚುಗಳೂ ಸೈನಿಕ ಮತ್ತು ಇತರ ಖಾತೆಗಳ ಪ್ರಾದೇಶಿಕ ಕೇಂದ್ರ ಕಚೇರಿಗಳೂ ಇಲ್ಲಿವೆ. ಸಂಯುಕ್ತಸಂಸ್ಥಾನದ ವಿಮಾನದಳದ ಯುದ್ಧತಂತ್ರ ವಿಭಾಗದ ಮುಖ್ಯ ಕಚೇರಿ ಇರುವುದು ನಗರಕ್ಕೆ 16 ಕಿಮೀ ದೂರದಲ್ಲಿ.

ಆಹಾರ ಸಂಸ್ಕರಣ ಮತ್ತು ಸಂವೇಷ್ಟನ, ರಸಾಯನ ಪದಾರ್ಥ, ವ್ಯವಸಾಯ ಯಂತ್ರ, ರೈಲು ರಸ್ತೆ ಸಲಕರಣೆ, ಕೀಟನಾಶಕ ಮುಂತಾದ ಕೈಗಾರಿಕೆಗಳು ಇಲ್ಲಿವೆ. ಧಾನ್ಯ, ಜಾನುವಾರು ಮತ್ತು ರಾಕೀಪರ್ವತದ ಅದಿರುಗಳ ಮಾರಾಟಕ್ಕೆ ಈ ನಗರ ಪ್ರಸಿದ್ಧ.
ಓಮಹಾ ಮುನಿಸಿಪಲ್ ವಿಶ್ವವಿದ್ಯಾನಿಲಯ, ಕ್ರೇಯ್ಟನ್ ವಿಶ್ವವಿದ್ಯಾನಿಲಯ, ನಿಬ್ರ್ಯಾಸ್ಕ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜ್ ವಿಶ್ವವಿದ್ಯಾನಿಲಯ-ಈ ಮೂರು ಇಲ್ಲಿಯ ವಿಶ್ವವಿದ್ಯಾನಿಲಯಗಳು.	(ಆರ್.ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ